ಕೆನಡಾದ ಮೂಲನಿವಾಸಿಗಳು -Sahana Harekrishna

ಯುರೋಪಿಯನ್ನರು ಭಾರತಕ್ಕೆ ಜಲಮಾರ್ಗ ಹುಡುಕುತ್ತಾ ಅಮೆರಿಕಾ ತಲುಪಿ ಅಲ್ಲಿಯ ಸ್ಥಳೀಯರನ್ನು’ ರೆಡ್ ಇಂಡಿಯನ್ನರು’ ಎಂದು ಕರೆದರೆಂದು ಶಾಲಾ ಪಾಠ ಪುಸ್ತಕಗಳಲ್ಲಿ ಓದಿದ್ದೆ. ಕುತೂಹಲ ಕುಡಿಯೊಡೆದಿದ್ದೆ ಆಗ. ಅಂತರ್ಜಾಲ ಇಲ್ಲದ ಆ ದಿನಗಳಲ್ಲಿ ಶಿಕ್ಷಕರು ಪಾಲಕರು ಹೇಳಿದ್ದೆ ಕೇಳಿದ್ದು. ಕೆನಡಾಕ್ಕೆ ಬಂದಾಗಿನಿಂದ ಅವರ ಇರುವಿಕೆಯ ಬಗ್ಗೆ ಅರಿಯುವ ಅವಕಾಶ ಹೆಚ್ಚಾಯಿತು.

ಯುರೋಪಿಯನ್ನರು ಕಾಲಿಟ್ಟ 11ನೇ ಶತಮಾನಕ್ಕೂ ಮುಂಚೆ ಮೂಲನಿವಾಸಿಗಳು ಅಮೆರಿಕದ ಉದ್ದಕ್ಕೂ ಶಾಂತಿಯಿಂದ ಜೀವನ ನಡೆಸುತ್ತಿದ್ದರು. ಕೇವಲ ಕೆನಡಾದಲ್ಲೇ ಆರುನೂರಕ್ಕೂ ಹೆಚ್ಚು ಪಂಗಡಗಳು ಇದ್ದವು. ಪ್ರತಿಯೊಂದು ಪಂಗಡ ಇತರ ಪಂಗಡ ಗಳಿಗಿಂತ ಕೊಂಚ ಭಿನ್ನವಾಗಿದ್ದರೂ ಎಲ್ಲರಿಗೂ ಸೃಷ್ಟಿಕರ್ತನೇ ದೈವ ಸಮಾನ. ಸುತ್ತಲಿನ ಮಣ್ಣು-ಮರ, ಪಕ್ಷಿ - ಪ್ರಾಣಿ, ಜಲ -ವಾಯು ಎಲ್ಲವನ್ನೂ ಪೂಜ್ಯನೀಯವಾಗಿ ಕಾಣುತ್ತಿದ್ದರು. ಪಂಗಡಕ್ಕೆ ಒಬ್ಬ ನಾಯಕ. ಅತ್ಯುತ್ತಮ ಬಿಲ್ಲುಗಾರನೆ ಆತನಾಗಿರುತ್ತಿದ್ದ. ಹತ್ತು ಹಲವಾರು ಜನರಿಂದ ಕೆಲವು ನೂರರಷ್ಟು ಜನಸಂಖ್ಯೆಯ ಗುಂಪುಗಳು ಒಟ್ಟಿಗೆ ಜೀವನ ನಡೆಸುತ್ತಿದ್ದರು. ಗಂಡಸರ ಕಸುಬು ಬೇಟೆಯಾಡುವುದು, ಕೃಷಿಗೆ ಬೇಕಾದ ನೆಲ ಸಮತಟ್ಟು ಮಾಡುವುದು, ಗುಡಿಸಲು ಕಟ್ಟುವುದು, ಮೀನು ಹಿಡಿಯುವುದು, ಪಂಗಡಗಳ ನಡುವೆ ಜಗಳವಾದಲ್ಲಿ ರಕ್ಷಣೆ ಮಾಡುವುದು. ಹೆಂಗಸರೋ ಅಡುಗೆ- ಕೃಷಿ- ಉಡುಗೆ-ತೊಡುಗೆ ಸಿದ್ಧಪಡಿಸುವುದು, ಹಣ್ಣು-ಹಂಪಲು ಸಂಗ್ರಹಿಸುವುದು, ಚಿಕ್ಕಪುಟ್ಟ ಪ್ರಾಣಿ-ಪಕ್ಷಿಗಳ ಬೇಟೆಯಾಡಿದರೆ, ಮನೆಯ ಹಿರಿಯರು ಚಿಕ್ಕಮಕ್ಕಳ ಲಾಲನೆ-ಪಾಲನೆ, ತಮ್ಮ ಸಂಸ್ಕಾರ ಸಂಸ್ಕೃತಿಯ ತಿಳುವಳಿಕೆ ಜೊತೆಗೆ ತಾವು ಕೇಳಿದ ಕಥೆಗಳನ್ನು ಮಕ್ಕಳಿಗೆ ಹೇಳುವ ಕಾಯಕದಲ್ಲಿ ತೊಡಗಿರುತ್ತಿದ್ದರು.

ಕೆನಡಾದ ಉತ್ತರಾರ್ಧ ವರ್ಷವಿಡೀ ಹಿಮಚ್ಚಾದಿತವಾದರೆ ದಕ್ಷಿಣಾರ್ಧ ಬೇಸಿಗೆಯಲ್ಲಿ ಹಿಮ ರಹಿತವಾಗಿರುತ್ತದೆ. ಮೂಲನಿವಾಸಿಗಳ ಕೆಲವು ಪಂಗಡಗಳು ಉತ್ತರದ ಹಿಮದಲ್ಲಿ ' ಇಗ್ಲೂ' ಗಳಂತಹ ಮನೆಗಳಲ್ಲಿದ್ದರೆ ದಕ್ಷಿಣದ ಪಂಗಡಗಳು ಅಲೆಮಾರಿ ಜೀವನ ನಡೆಸುತ್ತಿದ್ದರು. ಕೃಷಿಗೆ ಯೋಗ್ಯ ಭೂಮಿಯನ್ನು ಸಮತಟ್ಟಾಗಿಸಿ ಕೆಲಕಾಲ ವಾಸಿಸಿ , ಭೂಮಿಯ ಫಲವತ್ತತೆ ಕಡಿಮೆಯಾದಾಗ ಇನ್ನೊಂದೆಡೆ ವಲಸೆ ಹೋಗುತ್ತಿದ್ದರು. ಇವರು ಹೆಚ್ಚಾಗಿ ಜೋಳ, ಬೀನ್ಸ್ ಮತ್ತು ಕುಂಬಳವನ್ನು ಒಟ್ಟಿಗೆ ಬೆಳೆಯುತ್ತಿದ್ದರು. ಈ ರೀತಿಯ ಕೃಷಿಯನ್ನು 'ಮೂರು ಸಹೋದರಿಯರು' ( ೩ ಸಿಸ್ಟರ್ಸ್ ) ಎಂದು ಕರೆದರು. ಇವನ್ನು ತಮ್ಮ ಅಡುಗೆಯಲ್ಲಿ ಮತ್ತು ವ್ಯಾಪಾರಕ್ಕಾಗಿಯೂ ಬಳಸಿದರು. ಉತ್ತರದ ಭಾಗ ಹಿಮದಿಂದ ಕೂಡಿರುವುದರಿಂದ ಅಲ್ಲಿಯ ಮೂಲನಿವಾಸಿಗಳು ಕೇವಲ ಪ್ರಾಣಿಗಳನ್ನು ಬೇಟೆಯಾಡಿ ಜೀವನ ನಡೆಸುತ್ತಿದ್ದರು. ಪ್ರಾಣಿಗಳ ಮಾಂಸ ಸೇವಿಸಿ , ಉಳಿದ ಚರ್ಮವನ್ನು ಸ್ವಚ್ಛಗೊಳಿಸಿ ಮನೆಯ ಮೇಲೆ ಹೊದಿಸುತ್ತಿದ್ದರು . ಶೀತಗಾಳಿಯಿಂದ ರಕ್ಷಣೆ ಪಡೆಯುವ ವಿಧಾನ. ಗಂಡಸರು ಪ್ರಾಣಿಗಳ ಬೇಟೆಯಾಡಿದರೆ ಹೆಂಗಸರು ಪ್ರಾಣಿಗಳ ಚರ್ಮದಿಂದ ಉಡುಗೆ-ತೊಡುಗೆ ತಯಾರಿಸುತ್ತಿದ್ದರು. ಬೇಸಿಗೆಯಲ್ಲಿ ದಕ್ಷಿಣಕ್ಕೆ ತೆರಳಿ ಬೇಳೆ ಕಾಳುಗಳನ್ನು ಕೊಂಡು ಅಲ್ಲಿಯ ಮೂಲನಿವಾಸಿಗಳಿಗೆ ಚರ್ಮದ ಉಡುಗೆಗಳನ್ನು ಕೊಟ್ಟು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಹೆಚ್ಚಾದ ಬೇಳೆಕಾಳುಗಳನ್ನು ನೆಲದಲ್ಲಿ ಹೂತಿಟ್ಟು ಚಳಿಗಾಲಕ್ಕಾಗಿ ಕಾಪಿಡುತ್ತಿದ್ದರು.

ತ್ರಿಕೋನಾಕಾರದ ಇವರ ಮನೆಗಳನ್ನು ' ಟೀಪೀ ' ಎಂದರೆ ಕಟ್ಟಿಗೆಯ ಮನೆಗಳನ್ನು' ಲಾಂಗ ಹೌಸ್ ' ಎನ್ನಬಹುದು. ಟೀಪಿ ಗುಡಿಸಲುಗಳು ಕಟ್ಟಿಗೆ ಮತ್ತು ಪ್ರಾಣಿಯ ಚರ್ಮದಿಂದಾದರೆ ಅವನ್ನು ಒಂದೆಡೆಯಿಂದ ಇನ್ನೊಂದೆಡೆ ಸುಲಭವಾಗಿ ಮಡಚಿ ಸಾಗಿಸುತ್ತಿದ್ದರು.. ಇವುಗಳಲ್ಲಿ ಒಂದೇ ಕುಟುಂಬ ವಾಸಿಸಿದರೆ ಲಾಂಗ್ ಹೌಸ್ಗಳಲ್ಲಿ ಹತ್ತು ಹಲವಾರು ಕುಟುಂಬಗಳು ಒಟ್ಟಿಗೆ ಜೀವಿಸುತ್ತಿದ್ದರು. ಕಾರಣ ಈ ಗುಡಿಸಲುಗಳು ಸಹಜವಾಗಿ ದೊಡ್ಡದಿರುತ್ತಿದ್ದವು. ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಗುಡಿಸಲುಗಳ ಸುತ್ತ ತಾತ್ಕಾಲಿಕ ಬೇಲಿಗಳನ್ನು ನಿರ್ಮಿಸುತ್ತಿದ್ದರು. ಪಂಗಡಗಳ ನಡುವೆ ಕ್ಲೇಶಗಳಿದ್ದರೂ ವೈಷಮ್ಯ ಇರುತ್ತಿರಲಿಲ್ಲ. ಬಿಲ್ಲು ಬಾಣಗಳು ಬಳಕೆಯಲ್ಲಿದ್ದವು. ವರ್ಷದ ನಿರ್ದಿಷ್ಟ ಸಮಯಗಳಲ್ಲಿ ಎಲ್ಲರೂ ಒಂದೆಡೆ ಸೇರಿ ಜಾನಪದ ಹಾಡು- ನೃತ್ಯ ಆಟೋಟ ಗಳನ್ನು ನಡೆಸುತ್ತಿದ್ದರು. ಅತ್ಯಂತ ಆಕರ್ಷಣೀಯ ವಿಶಿಷ್ಟ ದಿರಿಸುಗಳನ್ನು ತೊಟ್ಟು ನರ್ತಿಸುವ ಪ್ರಾಕಾರವನ್ನು 'ಪೌವ್ ವಾವ್ ' ಎನ್ನುತ್ತಾರೆ. ಚಿಕನ್ ಡ್ಯಾನ್ಸ್, ಕ್ರೊ ಹಾಪ್ ಡಾನ್ಸ್ , ರಾಬಿಟ್ ಡ್ಯಾನ್ಸ್, ಸ್ನಿಯಿಕ್ ಅಪ್ ಅಪ್ ಡಾನ್ಸ್ , ಸ್ಮೋಕ್ ಡಾನ್ಸ್ , ಹೂಪ್ ಡಾನ್ಸ್ , ಔಲ್ ಡಾನ್ಸ್ , ಫ್ರೆಂಡ್ಶಿಪ್ ಡ್ಯಾನ್ಸ್, ಲೆಕ್ಕವಿಲ್ಲದಷ್ಟು ನೃತ್ಯ ಪ್ರಾಕಾರಗಳಿವೆ. ಅದಕ್ಕೆ ತಕ್ಕ ಸಾಂಪ್ರದಾಯಿಕ ವಾದ್ಯಗಳನ್ನು ಅವರು ನುಡಿಸುತ್ತಿದ್ದರು.
ಯುರೋಪಿನ ದೇಶಗಳಲ್ಲಿ ಉಂಟಾದ ಅಸಹಕಾರ ದಂಗೆಯಾಗಲಿ, ಆಫ್ಘ್ಗನ್ನರ ದಾಳಿಯಿಂದ ತತ್ತರಿಸಿ ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿಯಲಾಗಲೀ ಅಥವಾ ಬೀವರ್ ಎಂಬ ಪ್ರಾಣಿಯ ಉಣ್ಣೆಗಾಗಿ ಆಂಗ್ಲರು, ಫ್ರೆಂಚರು ಅಮೆರಿಕದೆಡಗೆ ಯಾನ ಪ್ರಾರಂಭಿಸಿದರು. ಹೀಗೆ ಬಂದ ವಿದೇಶಿಯರು ಸ್ಥಳೀಯರೊಡನೆ ಸ್ನೇಹ ಸಂಪಾದಿಸಿ ಬೀವರ್ ಪ್ರಾಣಿಗಳನ್ನು ಬೇಟೆಯಾಡಿ ಸಹಸ್ರಾರು ಹಡಗುಗಳಲ್ಲಿ ಯುರೋಪಿಗೆ ಉಣ್ಣೆಯ ಸಾಗಾಟ ನಡೆಸಿದರು. ಇಲ್ಲಿಯ ಮೂಲನಿವಾಸಿಗಳಿಗೆ ಸಣ್ಣಪುಟ್ಟ ಯುದ್ಧದ ಪರಿಕರಗಳನ್ನು, ಮದ್ಯವನ್ನು ಪರಿಚಯಿಸಿದರು. ಹೀಗೆ ಬಂದ ವ್ಯಾಪಾರಿಗಳು ಅಲ್ಲಲ್ಲಿ ಜಾಗ ಗುರುತಿಸಿ ತಮ್ಮ ಧ್ವಜವನ್ನು ಏರಿಸಿದರು. ಉದಾಹರೆಣೆಗೆ ೧೨ ಅಕ್ಟೋಬರ್ ೧೪೯೨ರಲ್ಲಿ ಕೋಲಂಬಸ್ ಬಹಾಮಾಸ್ ದ್ವೀಪ ತಲುಪಿ ಸ್ಪೇನಿನ ಧ್ವಜ ಏರಿಸಿದ. ಲೂಕಯಾನ ಎಂಬ ಇಲ್ಲಿಯ ಮೂಲನಿವಾಸಿಗಳು ಈ ದ್ವೀಪವನ್ನು 'ಗ್ವಾನಹನಿ' ಎಂದು ಕರೆದರೆ ಸ್ಪೇನಿಗರು ಇದನ್ನು ಸಾನ್ ಸಾಲ್ವಡಾರ್ ಎಂದರು.

ಸ್ಥಳೀಯ ಮೂಲನಿವಾಸಿ ಯುವತಿಯರನ್ನು ವಿದೇಶಿಗರು ಮದುವೆಯಾದರು. ಈ ಯುವತಿಯರು ಭಾಷೆ ತರ್ಜುಮೆ ಮಾಡುವಲ್ಲಿ ಬಹುವಾಗಿ ಸಹಾಯ ಮಾಡಿದರು. ಆಂಗ್ಲರು ಮತ್ತು ಫ್ರೆಂಚರ ನಡುವೆ ವಸಾಹತುಗಳ ಒಡೆತನಕ್ಕಾಗಿ ಸತತ ಯುದ್ಧಗಳು ನಡೆದವು. ಆದರೂ ಇವರು ಮೂಲನಿವಾಸಿಗಳನ್ನು ಕ್ರಮೇಣ ಹತೋಟಿಗೆ ಪಡೆದುಕೊಂಡರು. ರೆಡ್ ಇಂಡಿಯನ್ನರು ತಮ್ಮದೇ ನಾಡಿನಲ್ಲಿ ಪರಕೀಯರಾದರು. ಕಾಲಾಂತರದಲ್ಲಿ ಬಂಡೆದ್ದ ಕೋಟಿಗಟ್ಟಲೆ ಮೂಲನಿವಾಸಿಗಳನ್ನು ಕೊಲ್ಲಲಾಯಿತು. ಮಕ್ಕಳನ್ನು ಪಾಲಕರಿಂದ ಬೇರ್ಪಡಿಸಿ ವಸತಿ ಶಾಲೆಗಟ್ಟಲಾಯಿತು. ಪವಿತ್ರತೆಯ ಸಂಕೇತವಾದ ಅವರ ತಲೆಕೂದಲನ್ನು ಇಂತಹ ಶಾಲೆಗಳಲ್ಲಿ ಕತ್ತರಿಸಲಾಯಿತು. ಮೂಲ ಹೆಸರನ್ನು ಬದಲಾಯಿಸಿ ಆ೦ಗ್ಲ ಹೆಸರುಗಳನ್ನು ಮಕ್ಕಳಿಗೆ ಹೇರಲಾಯಿತು. ಮಾತೃ ಭಾಷೆಯಲ್ಲಿ ಸಂಭಾಷಿಸುವುದನ್ನು ನಿಷೇಧಿಸಲಾಯಿತು. ಒಂದು ಶತಮಾನಕ್ಕೂ ಹೆಚ್ಚು ಕಾಲ ಇಂತಹ ವಸತಿ ಶಾಲೆಗಳು ಕಾರ್ಯನಿರ್ವಹಿಸಿದವು. ಲೆಕ್ಕವಿಲ್ಲದಷ್ಟು ಯುವತಿಯರು ಮಹಿಳೆಯರು ಕಾಣೆಯಾದರು. ಇಂತಹ ಹಲವು ಕಾರಣಗಳಿಂದ ಮೂಲನಿವಾಸಿಗಳು ಈಗಲೂ ' ಥ್ಯಾಂಕ್ಸ್ ಗಿವಿಂಗ್ ' ಎಂಬ ದಿನವನ್ನು ಆಚರಿಸಲಾರರು.

ಇ೦ದಿನ ಪ್ರಜೆಗಳು ಮತ್ತು ಸರಕಾರ ಹಿ೦ದೆ ನಡೆದ ಇ೦ತಹ ಹೇಯ ಕ್ರತ್ಯಗಳನ್ನು ಖ೦ಡಿಸುವುದರ ಜೊತೆಗೆ ಆಗಾಗ ಮೂಲನಿವಾಸಿಗಳ ಕ್ಷಮೆ ಯಾಚಿಸುತ್ತಾರೆ. ಪ್ರತಿದಿನ ಶಾಲೆಗಳಲ್ಲಿ ರಾಷ್ಟೃಗೀತೆ ಹಾಡುವ ಮುನ್ನ ಮಕ್ಕಳು ಈ ಮೂಲನಿವಾಸಿಗಳನ್ನು ನೆನಸಿಕೊಳ್ಳಬೇಕೆ೦ಬ ಕಾನೂನು ರೂಪಿಸಲಾಗಿದೆ. ಈ ವರ್ಷದಿ೦ದ ಸೆಪ್ಟೆ೦ಬರ ೩೦ನ್ನು ನಾಶನಲ್ ಡೆ ಫ಼ೊರ್ ಟ್ರುತ್ ಅನ್ದ್ ರಿಕ೦ಸಿಲೆಶನ್ ಎ೦ದು ಸರ್ಕಾರ ಗುರುತಿಸಿದೆ. ಹೀಗೆ ಕಳೆದ ಕೆಲವು ದಶಕಗಳಿಂದ ಸಾಮಾಜಿಕ ಬದಲಾವಣೆ ಆಗುತ್ತಿದೆ. ಮೂಲನಿವಾಸಿಗಳ ಹಕ್ಕಿಗಾಗಿ ಹಲವು ವ್ಯಕ್ತಿಗಳು ಸಂಘ-ಸಂಸ್ಥೆಗಳು ಸಂಯಮದಿಂದ ದುಡಿಯುತ್ತಿವೆ. ಮೂಲನಿವಾಸಿಗಳಿಗೆ ಅವರದೇ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ ವಸತಿ ಸೌಕರ್ಯ ನೀಡಲಾಗಿದೆ. ಆರ್ಥಿಕ ಸೌಲಭ್ಯ ಕೂಡ ನೀಡಲಾಗುತ್ತಿದೆ. ವಸತಿ ಶಾಲೆಗಳನ್ನು ಮುಚ್ಚಲಾಗಿದೆ.ಅವರ ಕರಕುಶಲ- ಗುಡಿ ಕೈಗಾರಿಕೆಗೆ ಪ್ರೋತ್ಸಾಹ ದೊರಕುತ್ತಿದೆ. ಮುಖ್ಯವಾಹಿನಿಯಿಂದ ಅವರ ವಸತಿ ಪ್ರದೇಶಗಳು ದೂರದಲ್ಲಿದ್ದರೂ ಸಾಮಾನ್ಯರು ಅವರನ್ನು ಭೇಟಿಯಾಗುವ- ಅವರ ಸಂಸ್ಕೃತಿಯನ್ನು ಅರಿಯುವ ಅವಕಾಶ ಕಲ್ಪಿಸಲಾಗಿದೆ. ವರ್ಷದಲ್ಲಿ ಆಗಾಗ ಅವರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇತರರು ಇದರಲ್ಲಿ ಭಾಗಿಯಾಗಬಹುದು. ಮೂಲನಿವಾಸಿಗಳಲ್ಲಿ ' ಶಮನ್ ' ಎಂದು ಕರೆಯಲ್ಪಡುವ ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿಯಾಗುವ ಸದಾವಕಾಶವಿರುತ್ತದೆ. ಇವರ ಗಿಡಮೂಲಿಕೆಯ ರಹಸ್ಯ ಔಷಧಿಗಳು ಇಂದಿಗೂ ಜೀವಂತವಾಗಿವೆ. ಕೆನಡದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ' ಹೈದ ' ರೆ೦ಬ ಮೂಲನಿವಾಸಿಗಳು ಈಗಲೂ ' ಟೊಟೆಮ್ ' ಎ೦ಬ ಮರದ ಕೆತ್ತನೆಯ ಸ೦ದೇಶ ಸ್ತ೦ಭಗಳನ್ನು ಪ್ರದರ್ಶಿಸುವ ರೂಢಿಯಿಟ್ಟುಕೊ೦ಡಿದ್ದಾರೆ. ನುನಾವಟ್ ಎ೦ಬ ಉತ್ತರದ ರಾಜ್ಯದಲ್ಲಿ ನೆಲೆಸಿರುವ ಎಸ್ಕಿಮೊಗಳಾದ 'ಇನ್ಯುಟ್' ಮೂಲನಿವಾಸಿಗಳು ಇ೦ದಿಗೂ ಕಾರಿಬೂ ಎ೦ಬ ರೈಂಡೀಯರ್ ಜಿ೦ಕೆಗಳನ್ನೆ ಬೇಟೆಯಾಡಿ ಹಸಿ ಮಾ೦ಸವನ್ನು ಒಣಗಿಸಿ ತಿನ್ನುವ ಅಭ್ಯಾಸವನ್ನು ಬಿಟ್ಟಿಲ್ಲ. ಆದರೆ ನಾಯಿ ಬ೦ಡಿಗಳನ್ನು ಬಿಟ್ಟು ಹಿಮ ವಾಹನಗಳನ್ನು ಎಲ್ಲೆಡೆ ಉಪಯೋಗಿಸುತ್ತಿದ್ದಾರೆ.

ಹೀಗೆ ಇತಿಹಾಸವನ್ನು ಮರೆಯದೆ ಪ್ರಸ್ತುತ ಆಧುನಿಕ ಜೀವನಕ್ಕೆಒಗ್ಗಿ, ತಮ್ಮ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ ಬದುಕುತ್ತಿರುವ ಈ ಮೂಲನಿವಾಸಿಗಳು ಇಂದು ಉತ್ತರ ಮತ್ತು ದಕ್ಷಿಣ ಅಮೇರಿಕದುದ್ದಕ್ಕೂ ಅಲ್ಲಲ್ಲಿ ಕಂಡುಬರುತ್ತಾರೆ. ಶತಮಾನಗಳ ನಂತರ ಅವರು ಸಹಜ ಸ್ವತಂತ್ರ ಜೀವನ ನಡೆಸುವಲ್ಲಿ ಬಹುವಾಗಿ ಯಶಸ್ವಿಯಾಗಿದ್ದಾರೆ.

- ಸಹನಾ ಹರೇಕೃಷ್ಣ , ಟೊರೊಂಟೊ , ಕೆನಡಾ
Submitted by: Sahana Harekrishna
Submitted on: Sun Apr 23 2023 01:48:11 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

ಕಾಮೆಂಟ್‌ಗಳು